ಉಸ್ಮಾನಾಬಾದ್

	ಹಿಂದೆ ಹೈದರಾಬಾದ್ ಸಂಸ್ಥಾನದಲ್ಲಿದ್ದು ಈಗ ಮಹಾರಾಷ್ಟ್ರಕ್ಕೆ ಸೇರಿರುವ ಒಂದು ಪಟ್ಟಣ. ಅದೇ ಹೆಸರಿನ ಜಿಲ್ಲೆಯ ಕೇಂದ್ರ. ಜನಸಂಖ್ಯೆ 18,868 (1961). ಸೊಲ್ಲಾಪುರದಿಂದ ಉತ್ತರಕ್ಕೆ 35 ಮೈಲಿ ದೂರದಲ್ಲಿದೆ. ಎರಡು ಮೈಲಿ ದೂರದಲ್ಲಿ ಕೆಲವು ವೈಷ್ಣವ-ಜೈನ ಗವಿಗಳುಂಟು. ಇವನ್ನು 5-6ನೆಯ ಶತಮಾನಗಳಲ್ಲಿ ಕೊರೆಯಲಾಯಿತೆಂದು ಊಹಿಸಲಾಗಿದೆ.

	ಜಿಲ್ಲೆಯ ವಿಸ್ತೀರ್ಣ 5,504 ಚ.ಮೈ. ಜನಸಂಖ್ಯೆ 14,77,656 (1961). ಈ ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ 33" ಮಳೆಯಾಗುತ್ತದೆ. ಕಾಡೇ ಇಲ್ಲದ ಈ ಜಿಲ್ಲೆಯ ಮುಖ್ಯ ಬೆಳೆಗಳು ಜೋಳ, ಗೋಧಿ, ಭತ್ತ, ಹತ್ತಿ, ನೆಲಗಡಲೆ ಮತ್ತು ಸಜ್ಜೆ. ಉಸ್ಮಾನಾಬಾದಿಗೆ 12 ಮೈಲಿ ದೂರದಲ್ಲಿ ಇರುವ ಥೈರ್ ಎಂಬುದು ಹಿಂದೂಗಳ ಯಾತ್ರಾಸ್ಥಳ. ಇಲ್ಲಿ ಸಂತ ಗೊರೊಬನ ಮಂದಿರ ಇದೆ. ಪ್ರತಿ ವರ್ಷವೂ ನಡೆಯುವ ಜಾತ್ರೆಯ ಸಮಯದಲ್ಲಿ ಭಕ್ತರು ಹೆಚ್ಚು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಹಿಂದೂ ರಾಜನೊಬ್ಬ ಕಟ್ಟಿಸಿದ ಕೋಟೆ ಇತಿಹಾಸ ಪ್ರಸಿದ್ಧವಾದದ್ದು. ಇದನ್ನು ಬಹಮನಿ ಅರಸರೂ ಬಿಜಾಪುರದ ಷಾಹಿ ದೊರೆಗಳೂ ವಶಪಡಿಸಿಕೊಂಡಿದ್ದರು. ಇಲ್ಲಿ ಹರಿಯುವ ಬೋರಿ ನದಿಯ ಅಣೆಕಟ್ಟಿನ ನೀರು ಕೋಟೆಯೊಳಗಿನ ಪಾನೀ ಮಹಲಿನ ಚಾವಣಿಯ ಮೇಲೆ ಹರಿದು ಹೋಗುವುದೊಂದು ವೈಶಿಷ್ಟ್ಯ. ಈ ಕಟ್ಟೆಯನ್ನೂ ಮಹಲನ್ನೂ ಕಟ್ಟಿಸಿದವ ಎರಡನೆಯ ಇಬ್ರಾಹಿಂ ಆದಿಲ್ ಷಾ.

	ಲಾತೂರ್ ಈ ಜಿಲ್ಲೆಯ ಒಂದು ಮುಖ್ಯ ವಾಣಿಜ್ಯ ಕೇಂದ್ರ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ